ರತ್ನ
ಸಾಕಷ್ಟು ಆಕರ್ಷಕವಾಗಿರುವ ಹಾಗೂ ದೀರ್ಘಕಾಲ ಬಾಳಿಕೆಬರುವ, ವ್ಯಕ್ತಿಯ ಮೈಮೇಲೆ ಧರಿಸುವುದಕ್ಕೆ ಯೋಗ್ಯವೆನಿಸುವ, ನೈಸರ್ಗಿಕವಾಗಿ ದೊರೆಯುವ ಇಲ್ಲವೆ ಕೃತಕವಾಗಿ ತಯಾರುಮಾಡಿದ ಖನಿಜ ಅಥವಾ ಮತ್ತ್ಯಾವುದೇ ಜೈವಿಕವಸ್ತು (ಜೆಮ್), ಆಭರಣಗಳಲ್ಲಿ ಬಳಸುವಂಥ ವರ್ಣಮಯ ಖನಿಜ ಇಲ್ಲವೆ ಸಿಕತೀಕರಣಗೊಂಡ (ಪೆಟ್ರಿಫೈಡ್) ಸಾವಯವವಸ್ತುವಿಗೆ ರತ್ನಶಿಲೆ (ಜೆಮ್‍ಸ್ಟೋನ್) ಎಂದು ಹೆಸರು. ಸಾಮಾನ್ಯವಾಗಿ ಪ್ರಶಸ್ತವೆನಿಸುವ ಇಲ್ಲವೆ ಅರ್ಧಪ್ರಶಸ್ತವೆನಿಸುವ ಖನಿಜವನ್ನು ರತ್ನ ಎಂದು ಸಂಬೋಧಿಸುವುದಿದೆ.  ಈ ಮೌಲ್ಯ ರತ್ನ ಖನಿಜಗಳಲ್ಲಿ ಇರಬೇಕಾದರೆ ಅದು ಆಕರ್ಷಕ ವರ್ಣ ಇಲ್ಲವೆ ವರ್ಣರಹಿತವಾಗಿದ್ದು ನಯನ ಮನೋಹರವಾಗಿರಬೇಕು, ವರ್ಣದೀಪ್ತಿ, ಕತ್ತರಿಸಿದ ಹಲವಾರು ಮುಖ ಫಲಕ ಇಲ್ಲವೆ ಬಾಗಿದ ನಯವಾದ ಮೇಲ್ಮೈಯನ್ನು ಹೊಂದಿರಬೇಕು.  ಗೀಚಿಗೆ ಹೊರತಾಗಿರಬೇಕು.  ಒಂದು ನಿರ್ದಿಷ್ಟ ಅಳತೆಯ ಕಾಠಿಣ್ಯ ಮತ್ತು ಸಾಂದ್ರತೆಯನ್ನೂ ಹೊಂದಿರಬೇಕು ಎಂಬ ಅಂಶಗಳನ್ನು ಗಮನಿಸಿಕೊಳ್ಳಲಾಗುತ್ತದೆ. ಸ್ವಾಭಾವಿಕವಾಗಿ ದೊರೆಯುವ ರತ್ನಶಿಲೆಗಳಲ್ಲಿ ಈ ಕೆಲವೊಂದು ಅಂಶಗಳು ಸಾಕಷ್ಟು ಇರದಿದ್ದರೂ ಆ ಲುಪ್ತ ಅಂಶಗಳನ್ನು ಕೃತಕವಾಗಿ ಉಂಟು ಮಾಡಿಕೊಳ್ಳುವ ಕೈಗಾರಿಕೋದ್ಯಮ ಬೆಳೆದಿದೆ.
ರತ್ನವನ್ನು ಕಾಸುವುದಾಗಲಿ ಇಲ್ಲವೆ ರೇಡಿಯೋವಿಕಿರಣಗಳಿಗೆ ಈಡುಮಾಡುವುದಾಗಲಿ ಆದಲ್ಲಿ ಅದು ತಾಕ್ಕಾಲಿಕವಾಗಿ ತನ್ನ ಬಣ್ಣವನ್ನು ಬದಲಾಯಿಸಿದರೂ ಮತ್ತೆ ತನ್ನ ಸಹಜಸ್ವರೂಪ ಮತ್ತು ನೈಜಬಣ್ಣಗಳನ್ನು ಮರಳಿ ಪಡೆಯುತ್ತದೆ. ಇದೇ ನೈಸರ್ಗಿಕ ರತ್ನಗಳ ವಿಶಿಷ್ಟ ಗುಣ.

ಭೂ ಅಂತರಾಳದಲ್ಲಿ ದೊರೆಯುವ  ಕೆಲವು ಖನಿಜಗಳು ರಾಸಾಯನಿಕ ಸಂಯೋಜನೆಗಳಿಗೆ ಈಡಾಗಿ ಪ್ರಶಸ್ತಶಿಲೆಗಳು ಏರ್ಪಡುತ್ತವೆ.  ಉದಾಹರಣೆಗೆ ಅಲ್ಯೂಮಿನಿಯಮ್ ಆಕ್ಸೈಡ್ ಖನಿಜ ಕೆಂಪು ರತ್ನವಾಗಿಯೋ (ರೂಬಿ-ಮಾಣಿಕ್ಯ).  ನೀಲಮಣಿಯಾಗಿಯೋ (ಸಫೈರ್) ಪರಿವರ್ತನಗೊಳ್ಳುತ್ತದೆ.  ಇಂಗಾಲ ಸ್ಫಟಿಕೀಭವಿಸಿ ವಜ್ರವಾಗಿ (ಡೈಮಂಡ್), ಕ್ರೋಮಿಯಮ್ಮು ಬೆರಿಲಿಯಮ್ ಅಲ್ಯೂಮಿನಿಯಮ್ ಸಿಲಿಕೇಟ್‍ನೊಡನೆ ಬೆರೆತು ಪಚ್ಚೆ (ಎಮರಾಲ್ಡ್) ಆಗಿ, ಅಲ್ಯೂಮಿನಿಯಮ್ ಫ್ಲೂರೋಹೈಡ್ರಾಕ್ಸಿ ಸಿಲಿಕೇಟ್ ಖನಿಜ ಪುಷ್ಯರಾಗ (ಟೊಪಾಜ್)ಆಗಿ, ಸಿಲಿಕಾನ್ ಡೈಆಕ್ಸೈಡ್ ವೈಡೂರ್ಯ (ಆಮೆಥಿಸ್ಟ್) ಆಗಿ ಪರಿವರ್ತನೆಗೊಂಡು ಪ್ರಶಸ್ತಶಿಲೆಗಳೆನಿಸಿವೆ.  ಗೋಮೇದಕ (ಜಿûರ್ಕಾನ್).  ಅಕ್ವಮೆರಿನ್, ಪೆರಿಡಾಟ್, ರೂಬಿಲೈಟ್, ಸ್ಪಿನೆಲ್ ಇವೇ ಮುಂತಾದ ಖನಿಜಗಳು ಅರ್ಧಪ್ರಶಸ್ತ ರತ್ನಗಳ ಗುಂಪಿಗೆ ಸೇರುತ್ತವೆ.  ಹವಳ (ಪ್ರವಾಳ-ಕಾರಲ್), ಮುತ್ತು (ಪರ್ಲ್), ಕಾರಾಬಾ (ಆಂಬರ್), ಜೆಟ್ ಮುಂತಾದವನ್ನು ಜೈವಿಕ ರತ್ನಗಳ ಗುಂಪಿಗೆ ಸೇರಿಸಿದೆ.  ದಂತ (ಐವರಿ), ಕವಡೆ (ಸಿಪ್ರಿಯ), ಹುಲಿಉಗುರು,  ಖಡ್ಗಮೃಗ ಹಾಗೂ ಆನೆಹಲ್ಲು ಮತ್ತು ಆಮೆಯ ಚಿಪ್ಪು ಮುಂತಾದವು ರತ್ನಗಳ ಸಾಲಿಗೆ ಸೇರದಿದ್ದರೂ ಅವನ್ನು ರತ್ನಗಳಿಗೆ ಸರಿಸಮವೆಂದು ಪರಿಗಣಿಸಿ ಆಭರಣಗಳಲ್ಲಿ ಉಪಯೋಗಿಸುವುದಿದೆ.

	ಕಾಠಿಣ್ಯ ಕಡಿಮೆ ಇರುವ ಕೆಲವು ಅಪಾರಕ ಖನಿಜಗಳನ್ನೂ ಕೆಲವೊಮ್ಮೆ ರತ್ನಗಳನ್ನಾಗಿ ಉಪಯೋಗಿಸುವುದುಂಟು.  ಉದಾ: ಓಪಾಲ್, ಫ್ಲೂರೈಟ್, ಜೇಡ್ ಮತ್ತು ಅಗೆಟ್‍ಗಳು, ರತ್ನಖನಿಜಗಳ ಗುಣಾವಗುಣಗಳನ್ನು ಅಮೂಲಾಗ್ರವಾಗಿ ಪರೀಕ್ಷಿಸಿ, ಗುರುತಿಸಿ, ಮೌಲ್ಯಮಾಪನ ಮಾಡುವ ಮತ್ತು ನಯಗೊಳಿಸುವ ಇಲ್ಲವೆ ಮೆರುಗುಕೊಡುವ ಕಲೆಯನ್ನು ಒಳಗೊಂಡಿರುವ ವಿಜ್ಞಾನ ವಿಭಾಗ-ರತ್ನವಿಜ್ಞಾನ (ಜೆಮ್ಮಾಲಜಿ), 3000ಕ್ಕೂ ಹೆಚ್ಚಾಗಿರುವ ವಿವಿಧ ಖನಿಜಗಳಲ್ಲಿ, ಕೇವಲ 50 ಖನಿಜಗಳು ಮಾತ್ರ ರತ್ನದ ಹರಳುಗಳಾಗಿ ಉಪಯುಕ್ತವೆನಿಸಿವೆ; ಅಲ್ಲದೆ 130ಕ್ಕೂ ಮೀರಿದ ರತ್ನಪ್ರಭೇದಗಳಿವೆ.

	ಅನಾದಿಕಾಲದಿಂದಲೂ ರತ್ನಗಳು ಅಂತಸ್ತು ಮತ್ತು ಅಧಿಕಾರದ ಪ್ರತೀಕವೆನಿಸಿವೆ.  ರಾಜಮಹಾರಾಜರ ಕಿರೀಟ ಮತ್ತು ಅವರ ಉಡುಪನ್ನೂ ಅಲಂಕರಿಸಿವೆ.  ಸಹಜ ಮತ್ತು ಕೃತಕರತ್ನಗಳೆರಡರ ವ್ಯತ್ಯಾಸವನ್ನು ರತ್ನವಿಜ್ಞಾನಿಗಳು ಗುರುತಿಸಬಲ್ಲರು.  ಕೆಲವು ರತ್ನಗಳನ್ನು ಪ್ರಯೋಗಾಲಯದಲ್ಲಿ ತಯಾರಿಸಬಹುದು.  ಅವು ನೋಡಲು ಸಹಜರತ್ನಗಳಂತೆ ಕಂಡರೂ ನೈಜರತ್ನಗುಣಗಳಿಂದ ಬೇರೆಯೇ ಆಗಿರುತ್ತವೆ.  ಆದ್ದರಿಂದ ಇವನ್ನು ಕೃತಕರತ್ನಗಳೆಂದು ಕರೆಯುವರು.  ಉದಾಹರಣೆಗೆ ಅಮೆರಿಕ ಸಂಯುಕ್ತ ಸಂಸ್ಥಾನಗಳ ಜನ್ ಸ್ಲೊಕಂ ಎಂಬಾತ ಪ್ರಯೋಗಾಲಯದಲ್ಲಿ, ಯಿಟ್ರಿಯಮ್, ಅಲ್ಯೂಮಿನಿಯಮ್ ಮತ್ತು ಗಾರ್ನೆಟ್‍ಗಳ (ವೈ.ಎ.ಜಿ  ಖನಿಜಗಳ ಮೊದಲಕ್ಷರಗಳು) ಮಿಶ್ರಣದಿಂದ ನಕಲಿವಜ್ರಗಳನ್ನೆ ಅಲ್ಲದೆ ಕೃತಕ ಓಪಾಲ್‍ಗಳನ್ನು ತಯಾರಿಸಿದ.  ಫ್ರಾನ್ಸಿನ ಎಡ್‍ಮಂಡ್ ಪ್ರೈಮಿ ಎಂಬ ರಸಾಯನವಿಜ್ಞಾನಿ ಪ್ರಯೋಗಾಲಯದಲ್ಲಿ ಸ್ರಾವಕದ್ರವನ ತಂತ್ರ (ಫ್ಲಕ್ಸ್ ಮೆಲ್ಟ್ ಟೆಕ್ನಿಕ್) ಬಳಸಿ ಅಲ್ಯೂಮಿನಿಯಮ್ ಆಕ್ಸೈಡನ್ನು ಕ್ರೋಮಿಯಮ್ಮಿನ ಜೊತೆಗೆ ಕರಗಿಸಿದ್ದರಿಂದ ಕೃತಕ ಕೆಂಪುಮಣಿಗಳನ್ನು ಬೆಳೆಸಿದ (1877).  ಫ್ರಾನ್ಸಿನ ಗಿಲ್‍ಸನ್ ಎಂಬಾತ ತಯಾರಿಸಿದ ನಕಲಿರತ್ನಗಳು ಹೆಚ್ಚುಕಡಿಮೆ ನೈಜರತ್ನಗಳ ತದ್ರೂಪವಾಗಿದ್ದವು.  ಆದ್ದರಿಂದ ಆ ಕೃತಕ ರತ್ನಗಳಿಗೆ ಆತನ ಹೆಸರನ್ನೆ ಸೇರಿಸಿ-ಗಿಲ್‍ಸನ್ ಹವಳ, ಗಿಲ್‍ಸನ್ ಪಚ್ಚೆ, ಗಿಲ್‍ಸನ್ ಟಾಕ್ರ್ವಾಯಿಸ್, ಗಿಲ್‍ಸನ್ ಲ್ಯಾಪಿಸ್ ಲಾಜೂಲಿ, ಗಿಲ್‍ಸನ್ ಓಪಾಲ್ ಎಂದು ಕರೆಯುವುದಿದೆ.  ವೆರ್ನೆಯುಲ್ ಎಂಬ ಮತ್ತೊಬ್ಬ ಫ್ರೆಂಚ್ ರಸಾಯನವಿಜ್ಞಾನಿ.  ಪ್ರಸ್ತುತ ರೂಢಿಯಲ್ಲಿರುವ ಉರಿಬೆಸುಗೆ (ಫ್ಲೇಮ್ ಫ್ಯೂಷನ್) ತಂತ್ರವನ್ನು ಅಳವಡಿಸಿ ಕೃತಕರತ್ನಗಳನ್ನು ಬೆಳೆಸಿದ (1900).  20000ಅ ನಲ್ಲಿ ಪ್ರಕಾಶಮಾನವಾದ ಬೆಳಕನ್ನು ಬೀರುವ ಉರಿಗೆ ಖನಿಜಗಳ ನುಣ್ಣನೆಯ ಪುಡಿಯನ್ನು ಸುರಿಯುವುದರಿಂದ ಹಲವಾರು ಬಗೆಯ ರತ್ನಗಳನ್ನು ಆತ ತಯಾರಿಸಿದ.

	ಪ್ರಕೃತಿದತ್ತವಾದ ಮೂರು ಪ್ರಕಾರದ ಶಿಲೆಗಳಲ್ಲೂ (ಅಗ್ನಿಶಿಲೆ, ಜಲಜಶಿಲೆ ಮತ್ತು ರೂಪಾಂತರಿತಶಿಲೆಗಳು) ನೈಜರತ್ನಗಳು ಕಾಣಸಿಗುತ್ತವೆ.  ಕೆಲವು ರತ್ನಗಳು ಸರ್ವೇಸಾಧಾರಣವಾಗಿ ಪ್ರಪಂಚದ ಎಲ್ಲ ಭಾಗಗಳಲ್ಲೂ ದೊರೆಯುತ್ತವೆ.  ಉದಾ; ಬೆಣಚು (ವಿವಿಧ ಬಣ್ಣದವು).  ಕುರಂದ (ಕೊರಂಡಮ್) ಮತ್ತು ಗಾರ್ನೆಟ್ ರತ್ನಗಳು.  ಆದರೆ ವಜ್ರದಂಥ ರತ್ನಗಳು ಒಂದು ನಿರ್ದಿಷ್ಟ ಭೂವೈಜ್ಞಾನಿಕ ಶಿಲಾ ಪರಿಸರಕ್ಕೆ (ಕಿಂಬರ್‍ಲೈಟ್ ಎಂಬ ಶಿಲೆಗಳ ಪರಿಸರ) ಸೀಮಿತವಾಗಿರುವಂಥವು.  ಉದಾ: ಆಫ್ರಿಕ, ಬ್ರಜಿಲ್, ರಷ್ಯ ಮತ್ತು ಆಸ್ಟ್ರೇಲಿಯಗಳಲ್ಲಿಯ ಕಿಂಬರ್‍ಲೈಟ್ ಶಿಲೆಯಲ್ಲಿ ಮಾತ್ರ ದೊರೆಯುವ ವಜ್ರ.

	ಕೆಲವು ಭೌತಲಕ್ಷಣಗಳಿಂದ ರತ್ನಗಳನ್ನು ಅದರಲ್ಲೂ ಮುಖ್ಯವಾಗಿ ರತ್ನಖನಿಜದ ಬಣ್ಣ, ಒರೆಹಚ್ಚುವಿಕೆ, ಹೊಳಪು, ಸೀಳಿಕೆ, ಒಡೆದ ಮೇಲ್ಮೈಲಕ್ಷಣ, ಕಾಠಿಣ್ಯ, ಸಾಂದ್ರತೆ, ಸ್ಫಟಿಕರಚನೆ ಹಾಗೂ ರಾಸಾಯನಿಕ ಸಂಯೋಜನೆಗಳನ್ನು ಗಮನಿಸಲಾಗುವುದು.  ರತ್ನಗಳ ಬಣ್ಣ ಅವನ್ನು ಗುರುತಿಸಲು ಸಹಕಾರಿಯಾಗುತ್ತದೆ.  ಗೋಮೇದಕ, ಆಲ್ಟೈಟ್, ಶೀಲೈಟ್‍ಗಳು ಸಹ, ಬಿಳಿಯ ಬಣ್ಣ ಇಲ್ಲವೆ ಬೆಳ್ಳಿಯ ಬಣ್ಣಗಳಲ್ಲಿ ಹಾಲುಬೆಣಚು, ಜಿಪ್ಸಮ್‍ಗಳು ಇರುತ್ತದೆ.  ಹಳದಿ ಮತ್ತು ಕಂದುಬಣ್ಣಗಳಲ್ಲಿ ಶ್ಫಾಲರೈಟ್, ಟೈಟನೈಟ್, ಕಾರೂಬಾ, ಊದಾಬೆಣಚು; ಹಸರು ಬಣ್ಣದ ಪಚ್ಚೆ, ಪೆಂಡಾಟ್, ಯುವಾರವೈಟ್, ಜೇಡೈಟ್ ಡಯಾಪ್ಸೈಟ್, ಅಪಟೈಟ್ ಮತ್ತು ಗೋಮೇದಕಗಳು ಇವೆ.  ನೀಲಿ ಬಣ್ಣದ ವರ್ಗದಲ್ಲಿ ನೀಲಮಣಿ, ಸೋಡಾಲೈಟ್, ಲ್ಯಾಪಿಸ್ ಲಾಜೂಲಿ ಹಾಗೂ ಕಯನೈಟ್‍ಗಳು ಕಂಡುಬರುತ್ತವೆ.  ಕಪ್ಪು ವರ್ಣದಲ್ಲು ಟೂರ್ಮಲಿನ್ ಆಬ್ಸಿಡಿಯನ್, ಮೆಲನೈಟ್, ವಜ್ರ ಮತ್ತು ಹವಳಗಳು ಪ್ರಮುಖವೆನಿಸಿವೆ.  ಕೆಲವು ರತ್ನಗಳು ಬಣ್ಣರಹಿತವಾಗಿ ಪಾರಕವಾಗಿರಲೂಬಹುದು.  ಉದಾ; ಪಾರಕ ಬೆಣಚು-ಸ್ಫಟಿಕಮಣಿ (ರಾಕ್ ಕ್ರಿಸ್ಟಲ್) ವಜ್ರಗಳು; ಟೋಪಾಜ್ ಇತ್ಯಾದಿಗಳು.  ರತ್ನಗಳನ್ನು ಒರೆಹಚ್ಚಿದಾಗ ಅವು ತಮ್ಮ ಲಾಕ್ಷಣಿಕ ಬಣ್ಣದ ಪುಡಿಯನ್ನೇ ಒರೆಗೆರೆಯಗಿ (ಸ್ಟ್ರೀಕ್‍ಲೈನ್) ಕೊಡಬಹುದು.  ಉದಾ: ಟಾಲ್ಕ್, ಕ್ಯಾಲ್‍ಸೈಟ್, ಜಿಪ್ಸಮ್‍ಗಳು, ವ್ಯತಿರಿಕ್ತವಾದ ಬಣ್ಣವನ್ನು ಪ್ರದರ್ಶಿಸುವಂಥದೆಂದರೆ-ಪಿರೈಟ್ ಖನಿಜ.  ಇದು ಚಿನ್ನದ ಬಣ್ಣ ಹಾಗೂ ಹೊಳಪು ಹೊಂದಿದ್ದರೂ ಅದರ ಒರೆಯ ಬಣ್ಣ ಮಾತ್ರ ಕಪ್ಪು.

	ರತ್ನಗಳ ವಿಶೇಷ ಗುಣ ಎಂದರೆ ಅವುಗಳ ಹೊಳಪು (ಲಸ್ಪರ್).  ಇದು ವಜ್ರದಲ್ಲಿ ಪ್ರಮುಖವಾಗಿ ದೃಗ್ಗೋಚರ.  ಇದರಿಂದಾಗಿ ವಜ್ರಕ್ಕೆ ಹೆಚ್ಚಿನ ಆಕರ್ಷಣೆ ಇದೆ.  ಇದು ಕಡಿಮೆ ಪ್ರಕಾಶದ ಬೆಳಕಿನ ಸನ್ನಿವೇಶದಲ್ಲೂ ಹೆಚ್ಚಾಗಿ ಪ್ರಜ್ವಲಿಸುತ್ತದೆ.  ಇದೇ ವಜ್ರದ ವಿಶಿಷ್ಟ ಗುಣ.  ಹಿಮಟೈಟ್ ಖನಿಜಕ್ಕೆ ಲೋಹದ ಹೊಳಪಿದೆ.  ರತ್ನ ಖನಿಜಗಳಾದ ಕಾರೂಬಾ, ಜೇಡೈಟ್‍ಗಳು ಮೇಣದ ಮುದ್ದೆಯಂತಿದ್ದು ಮಂದ ಪ್ರಕಾಶವನ್ನು ಬೀರುತ್ತವೆ.

	ಸ್ಫಟಿಕರಚನೆ ಹೊಂದಿರುವ ಖನಿಜಗಳನ್ನು ಸುತ್ತಿಗೆಯಿಂದ ಬಡಿದಾಗ, ಖನಿಜ ಮೂಲರಚನೆಯ ಸಣ್ಣಸಣ್ಣ ತುಂಡುಗಳಾಗಿ ಸುಲಭ ಸೀಳಿಕೆಯನ್ನು ಪ್ರದರ್ಶಿಸುತ್ತವೆ.  ಮೂಲರಚನೆ ಮುದ್ದೆಯಾಗಿದ್ದಲ್ಲಿ ಆ ಖನಿಜ ಸೀಳಿಕೆರಹಿತವಾಗಿರುತ್ತದೆ.  ಅಲ್ಲದೆ ಇಂಥ ಖನಿಜಗಳ ಮೇಲ್ಮೈಯಲ್ಲಿ ಶಂಖ್ವಾಕೃತಿಯ (ಕನ್‍ಕ್ವಾಯ್ಡಲ್) ಚಕ್ಕೆ ಏಳುವುದು.  ಉದಾ: ಆಬ್ಸಿಡಿಯನ್.
	ಅಧಿಕ ಕಾಠಿಣ್ಯವೇ ರತ್ನಗಳ ಬಲು ಮುಖ್ಯಗುಣ.  ಅದು ಮೋಹ್ (ಜರ್ಮನಿಯ ಖನಿಜವಿಜ್ಞಾನಿ ಫ್ರೆಡರಿಕ್ ಮೋಹ್ (1775-1839) ಕಾಠಿಣ್ಯ 1 ಎಂದರೆ ಅತ್ಯಂತ ಮೆದುವಾದದ್ದು ಟಾಲ್ಕ್: ಅತ್ಯಂತ ಕಠಿಣವಾದದ್ದು ವಜ್ರ.  ಅದರ ಕಾಠಿಣ್ಯಾಂಕ 10.  ಸಾಮಾನ್ಯವಾಗಿ ರತ್ನಗಳ ಕಾಠಿಣ್ಯಾಂಕ 5ರಿಂದ 10ರವರೆಗೆ ಇರುತ್ತದೆ.

	ರತ್ನದ ಸಾಂದ್ರತೆ ಹೆಚ್ಚಿದಂತೆಲ್ಲ ಅದರ ತೂಕವೂ ಹೆಚ್ಚಾಗುತ್ತದೆ.  ಈ ಗುಣವನ್ನು ಅನುಸರಿಸಿ ಕೃತಕರತ್ನವನ್ನು ಸುಲಭವಾಗಿ ಪತ್ತೆಹಚ್ಚಬಹುದು.  ಉದಾ: ಕೆಂಪು (ಮಾಣಿಕ್ಯ) ಸಾಂದ್ರತೆ 400, ನಕಲಿ ಮಾಣಿಕ್ಯ ಸಾಂದ್ರತೆ 1.55, ಪಚ್ಚೆ ಸಾಂದ್ರತೆ 2.71, ನಕಲಿಪಚ್ಚೆ ಸಾಂದ್ರತೆ 1.55. ಒಂದೊಂದು ರತ್ನಕ್ಕೂ ತನ್ನದೇ ಆದ ಸ್ಫಟಿಕರಚನೆ ಇರುತ್ತದೆ.  ಈ ಗುಣದಿಂದ ನೈಜ ಇಲ್ಲವೆ ಕೃತಕರತ್ನಗಳನ್ನು ಪತ್ತೆಹಚ್ಚುವುದು ಸುಲಭ.  ಉದಾ: ವಜ್ರ ತ್ರಿಸಮಲಂಬಾಕ್ಷೀಯ (ಐಸೋಮೆಟ್ರಿಕ್) ರಚನೆಯನ್ನು ಹೊಂದಿರುತ್ತದೆ.  ಪಚ್ಚೆ ಎಂಬುದು ಷಣ್ಮುಖೀಯ (ಹೆಕ್ಷಾಗೋನಲ್)ರತ್ನ.  ಇದಲ್ಲದೆ ಇನ್ನೂ ಐದು ಸ್ಫಟಿಕರಚನೆಗಳಲ್ಲಿ ರತ್ನಗಳು ರೂಪುಗೊಳ್ಳುತ್ತವೆ.

	ನೈಜ ಮತ್ತು ಕೃತಕರತ್ನಗಳನ್ನು ನಿರ್ಧರಿಸಲು, ಅದನ್ನು ಪ್ರಯೋಗಾಲಯದಲ್ಲಿ ಹಲವಾರು ವೈಜ್ಞಾನಿಕ ಪರೀಕ್ಷೆಗಳಿಗೆ ಈಡುಮಾಡಲಾಗುವುದು.  ನಮ್ಮ ಕಣ್ಣಿಗೆ ಎರಡು ರತ್ನಗಳು ಮೇಲ್ನೋಟಕ್ಕೆ ಒಂದೇ ತೆರನಾಗಿ ಕಂಡುಬಂದರೂ ಅವನ್ನು ರೋಹಿತದರ್ಶಕದ (ಸ್ಪೆಕ್ಟ್ರೋಸ್ಕೋಪ್) ಮುಖಾಂತರ ಪರೀಕ್ಷಿಸಿದಾಗ ಸಹಜರತ್ನ ಒಂದೇ ಅವಶೋಷಣ ರೋಹಿತರೇಖೆಯನ್ನು ಪ್ರದರ್ಶಿಸುತ್ತದೆ.  ಉದಾ: ವಜ್ರ ಹಲವು ಬಣ್ಣದ ಅವಶೋಷಣ ರೋಹಿತರೇಖೆಯನ್ನು ಪ್ರದರ್ಶಿಸುತ್ತದೆ.  ಗಾಜು ಮತ್ತು ಬೆಣಚುಗಳು ಕೆಂಪು,  ಕಪ್ಪುರೇಖೆಯನ್ನೂ ಮಾಣಿಕ್ಯ (ಕೆಂಪು) ಆರು ರೇಖೆಗಳನ್ನು ಪ್ರದರ್ಶಿಸುವುವು.

	ಪ್ರತಿಯೊಂದು ರತ್ನಕ್ಕೂ ತನ್ನದೇ ಆದ ವಕ್ರೀಭವನಾಂಕ (ರಿಫ್ರ್ಯಾಕ್ಟಿವ್ ಇಂಡೆಕ್ಸ್) ಇರುವುದರಿಂದ ಇವುಗಳ ಆಧಾರದ ಮೇಲೆ ನೈಜ ಇಲ್ಲವೆ ಕೃತಕರತ್ನಗಳನ್ನು ಸುಲಭವಾಗಿ ಪತ್ತೆಹಚ್ಚಬಹುದು.  ಉದಾ: ವಜ್ರದ ವಕ್ರೀಭವನಾಂಕ 2.42. ಆದರೆ ಗಾಜು ಮತ್ತು ಬೆಣಚು 1.5, ವೈಡೂರ್ಯ 1.5, ಗೋಮೇದಕಕ್ಕೆ 1.98, ಮಾಣಿಕ್ಯ 1.77, ನೀಲ 1.77, ಹವಳ 1.6.

	ವಕ್ರೀಭವನದ್ರವದಿಂದ (ರಿಫ್ರಾಕ್ಟೀವ್ ಇಂಡೆಕ್ಸ್ ಲಿಕ್ವಿಡ್) ನೈಜ ಇಲ್ಲವೆ ಕೃತಕರತ್ನಗಳನ್ನು ಪತ್ತೆಹಚ್ಚಬಹುದು.  ಕ್ಲೆರ್ಸಿ (ಕ್ಲೋರೋಫಾರಮ್, ಬ್ರೋಮೋಫಾರಮ್ ಮತ್ತು ಕಾರ್ಬನ್ ಟೆಟ್ರಾಕ್ಲೋರೈಡ್ ಮಿಶ್ರಣ) ವಕ್ರೀಭವನ ದ್ರವದೊಳಗೆ ರತ್ನಗಳನ್ನು ಹಾಕಿದಾಗ, ಸಹಜರತ್ನಕ್ಕೆ ಅಧಿಕ ಸಾಂದ್ರತೆ ಇದೆಯಾಗಿ ಅದು ಆ ದ್ರವದಲ್ಲಿ ಮುಳುಗುವುದು.  ಕೃತಕದ್ದು ತನ್ನ ಕಡಿಮೆ ಸಾಂದ್ರತೆಯಿಂದಾಗಿ ತೇಲುತ್ತದೆ.

ಪಾಶ್ಚಾತ್ಯ ಪದ್ಧತಿ
ರತ್ನಗಳು
ಹುಟ್ಟಿದ ತಿಂಗಳು ಹಾಗೂ ಅವಧಿ
ರಾಶಿ

ಮಾಣಿಕ್ಯ
(ಕೆಂಪು-ಗಾರ್ನೆಟ್ ವಿಧ)
ಡಿಸೆಂಬರ್ 21- ಜನವರಿ 19
ಜನವರಿ 20-ಫೆಬ್ರುವರಿ 18
ಕೇಪ್ರಿಕಾರ್ನ್ (ಮಕರ)
ಅಕ್ವೆರಿಸ್ (ಕುಂಭ) 

ವೈಡೂರ್ಯ
(ಅಮಥಿಸ್ಟ್)
ಫೆಬ್ರುವರಿ 19 -ಮಾರ್ಚ್ 20
ಪೈಸೀಸ್ (ಮೀನ)

ಅಕ್ವಮೆರಿನ್
(ಬೆರಿಲ್ ಖನಿಜ ವಿಧ)
ಮಾರ್ಚ್21 -ಏಪ್ರಿಲ್ 20
ಏರಿಸ್ (ಮೇಷ)

ವಜ್ರ
(ಡೈಮಂಡ್)
ಏಪ್ರಿಲ್ 21-ಮೇ 20
ಟಾರಸ್ (ವೃಷಭ)

ಪಚ್ಚೆ
(ಎಮರಾಲ್ಡ್)
ಮೇ 21-ಜೂನ್ 20
ಜೆಮಿನಿ (ಮಿಥುನ)

ಮುತ್ತು
(ಪರ್ಲ್)
ಜೂನ್ 21-ಜುಲೈ 20
ಕ್ಯಾನ್ಸರ್ (ಕಟಕ)

ಕೆಂಪು
(ಕೊರಂಡಮ್-ರೂಬಿ)
ಜುಲೈ 21-ಆಗಸ್ಟ್ 21
ಲಿಯೋ (ಸಿಂಹ)

ಪೆರಿಡೋಟ್
(ಗಾರ್ನೆಟ್ ವಿಧ)
ಆಗಸ್ಟ್ 22-ಸೆಪ್ಟೆಂಬರ್ 22
ವಿರ್ಗೋ (ಕನ್ಯಾ)

ನೀಲ
(ಸಫೈರ್)
ಸೆಪ್ಟೆಂಬರ್ 23-ಅಕ್ಟೋಬರ್ 22
ಲೈಬ್ರ (ತುಲಾ)

ಓಪಾಲ್
(ಬೆಣಚಿನ ವಿಧ)
ಅಕ್ಟೋಬರ್ 23-ನವೆಂಬರ್ 22
ಸ್ಕಾರ್ಪಿಯೋ (ವೃಶ್ಚಿಕ)

ಪುಪ್ಯರಾಗ
(ಟೋಪಾಜ್)
ನವೆಂಬರ್ 23-ಡಿಸೆಂಬರ್ 20
ಸಾಜಿಟೇರಿಯಸ್ (ಧನುಸ್ಸು)

ಟಾಕ್ರ್ವಾಯಿಸ್
ಡಿಸೆಂಬರ್ 21-ಜನವರಿ 19
ಕೇಪ್ರಿಕಾರ್ನ್ (ಮಕರ)

(ನೋಡಿ- ಅಗೇಟ್)
(ನೋಡಿ- ಕುರಂದ)
(ನೋಡಿ- ಕೆಂಪು)
(ನೋಡಿ- ನೀಲ)
(ನೋಡಿ- ಪಚ್ಚೆ)
(ನೋಡಿ- ಪುಷ್ಯರಾಗ)
(ನೋಡಿ- ಮುತ್ತು) 

  	ಈ ಎರಡು ರತ್ನವಿಧಗಳನ್ನು ಸೂಕ್ಷ್ಮದರ್ಶಕೀಯ, ಎಲೆಕ್ಟ್ರಾನ್ ಮೈಕ್ರಾಸ್ಕೋಪ್, ಎಕ್ಸ್ ಕಿರಣ ಮತ್ತು ಅತಿನೇರಿಳೆ ಬೆಳಕು ವಿಧಾನಗಳ ಪರೀಕ್ಷೆಯಿಂದಲೂ ಪತ್ತೆಹಚ್ಚಬಹುದು.  ನೈಜರತ್ನಕ್ಕೆ ಅದರದೇ ಆದ ಕಲ್ಮಶಗಳಿರುತ್ತದೆ.  ಉದಾ: ರೂಟೈಲ್ ಖನಿಜದ ಸೂಕ್ಷ್ಮ ಎಳೆಗಳು, ಕಲ್ನಾರಿನ ಎಳೆಗಳು, ವಾಯುಗುಳ್ಳೆಗಳು, ಸೂಕ್ಷ್ಮ ಒಡಕುಗಳು ಹಾಗೂ ವಿವಿಧ ಖನಿಜಗಳ ತುಣುಕುಗಳು.  ಕೃತಕರತ್ನದಲ್ಲಿ ಈ ಯಾವ ಕಲ್ಮಶಗಳೂ ಇರುವುದಿಲ್ಲ.

	ಪ್ರತಿಯೊಂದು ನೈಜರತ್ನಕ್ಕೂ ತನ್ನದೇ ಆದ ಸೀಮಿತವಾದ ಉಷ್ಣವಹನತೆ (ಹೀಟ್ ಕಂಡಕ್ಟಿವಿಟಿ) ಇರುವುದರಿಂದ ನಕಲಿ ರತ್ನಗಳನ್ನು ಈ ಪರೀಕ್ಷೆಯಿಂದಲೂ ಪತ್ತೆಹಚ್ಚಬಹುದು.

	ಭಾರತದಲ್ಲಿ ರತ್ನಶಿಲೆಗಳು ಹೇರಳವಾಗಿ ಲಭ್ಯವಿವೆ.  ಮಧ್ಯಪ್ರದೇಶದ ಪನ್ನ ಎಂಬಲ್ಲಿ, ಆಂಧ್ರಪ್ರದೇಶದ ವಜ್ರಕರೂರ್ ಎಂಬಲ್ಲಿ ವಜ್ರಗಳು ದೊರೆಯುತ್ತವೆ.  ವಿಂಧ್ಯ ಶಿಲಾಸಮುದಾಯದ ಪೆಂಟೆಶಿಲೆಗಳಲ್ಲಿ ವಜ್ರ ಕಾಣಸಿಗುವುದು.  ಕಾಶ್ಮೀರದಲ್ಲಿ ಶುಭ್ರವಾದ ನೀಲಮಣಿಗಳು ಸಿಗುತ್ತವೆ.  ಕೆಂಪುರತ್ನದ ಎರಡು ವಿಧಗಳಾದ ಗಾರ್ನೆಟ್ ಮತ್ತು ಕುರಂದ (ಕೆಂಪು_ರೂಬಿ) ಖನಿಜಗಳು ಕರ್ನಾಟಕದ ಹೊಳೆನರಸೀಪುರ, ಹೆಗ್ಗಡದೇವನಕೋಟೆ, ಕೊರಟಗೆರೆ, ಮೇಲುಕೋಟೆ, ಕುಣಿಗಲು, ತಿರುಮಕೂಡಲು ನರಸೀಪುರ, ಮೈಸೂರು, ಮಳವಳ್ಳಿ, ಬಿಳಿಕೆರೆ, ಹುಣಸೂರು, ಅರಸೀಕೆರೆ, ಅರಕಲಗೂಡು, ಬಂಗಾರಪೇಟೆ, ಕಾಮಸಮುದ್ರ, ಮಡಿಕೇರಿ, ಸುಬ್ರಹ್ಮಣ್ಯ, ಶೃಂಗೇರಿ ಹಾಗೂ ಕೊಲ್ಲೂರುಗಳಲ್ಲಿ ಕಾಣಸಿಗುತ್ತದೆ.  ವೈಡೂರ್ಯ ಮತ್ತು ಬೆಣಚಿನ ವಿವಿಧ ರೂಪಗಳಾದ ಜಾಸ್ಟರ್, ರಾಕ್‍ಕ್ರಿಸ್ಟಲ್ (ಸ್ಫಟಿಕ), ಅಗೇಟ್, ಆಬ್ಸಿಡಿಯನ್, ಟೈಗರ್ಸ್‍ಐಗಳು ಗುಲ್ಬರ್ಗ, ಬೆಳಗಾಂವಿ ಪ್ರದೇಶಗಳಲ್ಲಿ ಅಲ್ಲಲ್ಲಿ ದೊರೆಯುತ್ತವೆ.

	ಭಾರತೀಯರಲ್ಲಿ ಮತ್ತು ಪಾಶ್ಚಾತ್ಯರಲ್ಲಿ ರತ್ನಗಳಿಗೆ ವಿಶೇಷ ಸ್ಥಾನವಿದೆ.  ಭಾರತೀಯಜ್ಯೋತಿಷದಲ್ಲಿ ನವರತ್ನಗಳನ್ನು ನವಗ್ರಹಗಳಿಗೆ ಆರೋಪಿಸಿಯೂ ವಿವರಣೆ ನೀಡುವ ಸಂಪ್ರದಾಯ ಇದೆ.  ಪಾಶ್ಚಾತ್ಯರಲ್ಲಿ ರತ್ನಶಿಲೆಗಳನ್ನು ವ್ಯಕ್ತಿ ಹುಟ್ಟಿದ ತಿಂಗಳು ಮತ್ತು ಅವಧಿ ಹಾಗೂ ಜನ್ಮರಾಶಿಗಳಿಗೆ ಆರೋಪಿಸಿ ಭವಿಷ್ಯ ನುಡಿಯುವುದಿದೆ. ಇದಕ್ಕೆ ಯಾವ ವೈಜ್ಞಾನಿಕ ಆಧಾರವೂ ಇಲ್ಲ.
ಭಾರತೀಯ ಪದ್ಧತಿ

ರತ್ನಗಳು			 ಅಧಿಪತಿ (ಗ್ರಹ)			ರಾಶಿ			ದಿಕ್ಕು

ಕೆಂಪು (ಮಾಣಿಕ್ಯ)		 ರವಿ			       ಸಿಂಹ			ಮಧ್ಯ	  
ಮುತ್ತು                ಚಂದ್ರ	                ಕರ್ಕಾಟಕ		ಅಗ್ನಿ
ಪ್ರವಾಳ (ಹವಳ)		 ಕುಜ				ಮೇಷ-ವೃಶ್ಚಿಕ		ದಕ್ಷಿಣ
ಪಚ್ಚೆ (ಮರಕತ)		 ಬುಧ				ಮಿಥುನ-ಕನ್ಯಾ		ಈಶಾನ್ಯ
ಪುಷ್ಯರಾಗ		 ಗುರು				ಧನುಸ್ಸು-ಮೀನ		ಉತ್ತರ
ವಜ್ರ (ಹೀರಾ)		 ಶುಕ್ರ				ವೃಷಭ-ತುಲಾ		ಪೂರ್ವ
ನೀಲಮಣಿ		 ಶನಿ				ಮಕರ-ಕುಂಭ		ಪಶ್ಚಿಮ
ಗೋಮೇದಕ		 ರಾಹು				ಕನ್ಯಾ			ನೈಋತ್ಯ
ವೈಡೂರ್ಯ		 ಕೇತು				ಮೀನ			ವಾಯುವ್ಯ

												*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ